ಶುಕ್ರವಾರ, ನವೆಂಬರ್ 4, 2011

ಹೆಂಡ ಮುಟ್ಟಿಲ್ಲ, ಹೆಂಡ್ತಿಗ್ ಕೈ ಕೊಡಲ್ಲ, ಪ್ರಾಣ ಹೋದ್ರು ಕನ್ನಡ ಪದಗಳ್ ಬಿಡಲ್ಲ ... :)







ಬೆಳಗ್ಗೆ ನನ್ನ ಗೆಳೆಯ ಚಂದನ್ (ಕನ್ನಡದ ಸೈನಿಕ. ) ತನ್ನ facebook ನಲ್ಲಿ ರಾಜರತ್ನಂ ರವರ ಕವನದ ಸಾಲುಗಳುಳ್ಳ ಈ ಚಿತ್ರವನ್ನ ಬಳಸಿ "ಹೆಂಗೆ ನಾವು" ಅನ್ನೋ ಪ್ರೆಶ್ನೆ ಇಟ್ಟಿದ್ದ .. :) ಅದಕ್ಕ್ ನನಗನ್ಸಿದ ಎರಡು ಪದಗಳ ಕಾಮೆಂಟ್ ಬರೆದೆ.



ರಾಜರತ್ನಂ ರವರು ಪ್ರತಿ ಒಬ್ಬ ಕನ್ನಡಿಗನಿಗೆ ಚಿರ ಪರಿಚಿತರು . ಯುವ ಪೀಳಿಗೆಗೆ ಇವರ ರತ್ನನ ಪದಗಳ ಘಮಲು ಬಲು ಸುಲಭವಾಗ್ ಹತ್ತುತ್ತೆ. ಕಾರಣ ಅ ಸಮಯದಲ್ಲಿ ಏರ್ಪಡಾಗೋ ಸುಖ ಸುಮ್ಮನೆ connectivity.


ಪ್ರಾಯಶಃ ನಾವ್ ಹುಟ್ಟಕ್ ಮುಂಚೆ ಈ ಲೋಕದ ಯಾತ್ರೆ ಮುಗಿಸಿದ್ದ ರಾಜರತ್ನಂ ಅವರು ಇಂದಿಗೂ ನಮ್ಮ ಜೀವನದ ಹಲವು ಮಜಲುಗಳಲ್ಲಿ ಬದುಕಿದ್ದರೆ ಅನ್ನೋದು ಸತ್ಯ. ನನ್ನ ಬಾಲ್ಯದ ಕನ್ನಡ ಪದ್ಯಗಳೇ , ನನ್ನ ಮಗನ ಕನ್ನಡ ಪದ್ಯಗಳು .(ನಾಯಿ ಮರಿ ನಾಯಿ ಮರಿ ತಿಂಡಿ, ನಮ್ಮ ಮನೆಯಲೊಂದು ಪುಟ್ಟ ಪಾಪ.. ). ಇದರ ಕತೃ ಸಾಕ್ಷಾತ್ ರಾಜರತ್ನಂ ಅನ್ನೋ ಸತ್ಯ ಹಲವರಿಗೆ ಗೊತ್ತಿರಲಾರದು.


ಅವರ ಬೆಳದಿಂಗಳ ರಾತ್ರಿಲಿ, ಪುಟ್ನಂಜಿ, ಬ್ರಹ್ಮ ನಿ೦ಗೆ ಜೋಡಿಸ್ತಿನಿ , ಕೇಳಿರದ ಕನ್ನಡ ಬಲ್ಲವರು ಇರಲಾರರು ..
ಇವರ ಪದ್ಯಗಳನ್ನ ಹಾಡುಗಳನ್ನಾಗಿಸಿದ ನಮ್ಮ ಸಂಗೀತಗಾರರಿಗೆ ಮುಖ್ಯವಾಗಿ ಮೈಸೂರು ಅನಂತಸ್ವಾಮಿಯವರಿಗೆ, ಬಿ.ಕೆ. ಸುಮಿತ್ರಮ್ಮ ನವರಿಗೆ ವಂದನೆಗಳು. ಮಕ್ಕಳ ಪದ್ಯಗಳ ಸರಳತೆಯಿಂದ, ರತ್ನನ್ ಪದಗಳೋಳಗಿರೋ, ಜೀವನದ ಅನನ್ಯ ಸೂಕ್ಷಮತೆ ಹಾಗೂ ಕನ್ನಡದ ಅಭಿಮಾನವನ್ನ ಉಣಬಡಿಸಿರುವ ನಿಮಗೆ ಕೋಟಿ ಕೋಟಿ ನಮನಗಳು.




ಅರುಣ್ (ಆಚರಾ)

ಸೋಮವಾರ, ಅಕ್ಟೋಬರ್ 31, 2011

ಅಭಯ ಕರ್ನಾಟ!

ನನ್ನ ನಲ್ಮೆಯ ಗೆಳೆಯರೆಲ್ಲರಿಗೂ ೨೦೧೧ರ "ಕನ್ನಡ ರಾಜ್ಯೋತ್ಸವದ ಶುಭಾಷಯಗಳು".
ನವೆಂಬರ್ ತಿಂಗಳು ಕನ್ನಡದ ಹಬ್ಬ. ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ದುಡಿದವರ ನೆನೆಯುವ, ದುಡಿವವರ ಹುರಿದುಂಬಿಸುವ, ಭಾಷಾಭಿಮಾನ ಮತ್ತು ನಾಡಿನ ಅಭಿಮಾನ ವೃದ್ಧಿಸುವ ಕೈಂಕರ್ಯ ಈ ಹಬ್ಬದ ವಿಶೇಷ.

ಇದೇ ಸಂದರ್ಭದಲ್ಲಿ ನನ್ನ ಹಲವು ದಿನಗಳ ಆಸೆ, ಕೊನೆಗೂ ’ಬ್ಲಾಗ್’ ಮಾಡಲೇಬೇಕೆಂಬ ನಿರ್ಧಾರ!!!. ಕನ್ನಡದ ಬಗೆಗಿನ ಸಹಜ ಅಭಿಮಾನ, ನಾಡಿನ ಮೇಲೆ ಹುಟ್ಟಿನಿಂದ ಬಂದ ಪ್ರೀತಿ, ಹಿಂದೆ ಬರೆದ ಹಲವು ಕವನಗಳ ಅನುಭವ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಡು , ನಾಟಕ ,ಕಿರು ನಾಟಕಗಳಿಗೆ ಸಂಭಾಷಣೆ ಬರೆಯುತ್ತಿದ್ದ ಅನುಭವ, ನನ್ನನ್ನು ಈ ಕಾರ್ಯಕ್ಕೆ ಹುರಿದುಂಬಿಸಿದ ನನ್ನ ಗೆಳೆಯರು, ನನ್ನ ಕೈ ಹಿಡಿಯಬಹುದು ಅನ್ನೋ ನಂಬಿಕೆ :) ....

ಶೀರ್ಷಿಕೆಯ ಬಗ್ಗೆ ಯೋಚಿಸುವಾಗ, ಹಲವು ಹೆಸರುಗಳು ಮಿಂಚಿದವು. ಅನುಭವವನ್ನ, ಅನಿಸಿಕೆ, ಭಾವನೆ, ರಾಜ್ಯ ಭಾಷೆ, ನನ್ನ ಕನ್ನಡ, ಹಳೆಯ ಕವನ , ....... ... ಇನ್ನು ಹಲವು ... ..ಇವಲ್ಲೆವನ್ನು ಹಂಚಿಕೊಳ್ಳೋ ತವಕ. ಅದರೆ ಎಲ್ಲವೂ ಸರಳವಾಗಿ !!

ತರ್ಕವಿತ್ತು ಯೋಚಿಸಿದೆ. ನಾನು ನಾನಾಗಿ, ಎನ್ನನ್ನ ಸರಳವಾಗಿ ಬರೆಯಬಲ್ಲೆ ಎಂದು ಪ್ರಶ್ನಿಸಿಕೊಂಡಾಗ ಹೊಳೆದ ಎರಡು ವಿಷಯಗಳು,
೧ . ನನ್ನ ನಾಡು ನುಡಿ
೨. ನನ್ನ ಮಗ 'ಅಭಯ' ನ ಹೆಸರು
ಗೊತ್ತಿಲ್ಲದೆ ಕುಮಾರ ವ್ಯಾಸನ 'ಕರ್ನಾಟ ಭಾರತ ಕಥಾ ಮಂಜರಿ' ಶೀರ್ಷಿಕೆ ಸ್ಪೂರ್ತಿಯಾಯ್ತು .
ನಮ್ಮ ಇಂದಿನ ಕರ್ನಾಟಕ ಅಂದು ವಿಜಯನಗರ ಕಾಲದ ಕರ್ನಾಟ ರಾಜ್ಯ.. !!! ಒಮ್ಮೆ ಹೃದಯ ತುಂಬಿದ ಹೆಮ್ಮೆ !

ಬ್ಲಾಗುಗಳನ್ನ "ಅಭಯ ಕರ್ನಾಟ" ದ ಶೀರ್ಷಿಕೆ ಅಡಿಯಲ್ಲಿ ಇನ್ನು ಕನಿಷ್ಠ ಎರಡು ವಾರಕ್ಕೊಮ್ಮೆ ಬರೆಯಲೆ ಬೇಕು ಎಂದು ನಿರ್ಧರಿಸಿ ಈ ಸಾಹಿತ್ಯ ಪ್ರಾಕಾರದ (ಬ್ಲಾಗ್) ಪ್ರಪಂಚಕ್ಕೆ ಅಂಬೆ ಗಾಲಿಡುತಿದ್ದೇನೆ . ನಿಮ್ಮ ಸಹಕಾರ ಜೊತೆಗಿರಲಿ .. ತಪ್ಪಾದಲ್ಲಿ ತಿದ್ದಿ ನೆಡಸಿ.

ನನ್ನೆಲ್ಲ ಗೆಳೆಯರಿಗೆ ಮತ್ತೊಮ್ಮೆ "ಕನ್ನಡ ರಾಜ್ಯೋತ್ಸವದ ಶುಭಾಷಯಗಳು". ಕರ್ನಾಟಕಕ್ಕೆ ಈ ವರುಷ ಒಳಿತಾಗಲಿ... ಕನ್ನಡಿಗರೆಲ್ಲರೂ ಈ ವರುಷ ಹರ್ಷ ತರಲಿ..!!

ನಿಮ್ಮ ಅರುಣ್ ( ಆಚರಾ)